Open letter to the Honourable Chief Minister regarding the negative impact caused by illegal sale of alcohol in the state of Karnataka

Posted on September 15, 2019

We the members of Bhima Sangha, Children’s Sanghas, Women’s Sanghas and the Grama Panchayat Hakkottaya Andolana, who have repeatedly shared the pain and agony caused to us by the sale of illegal alcohol have been shocked by the Statement of the Minister of Excise of Karnataka about the plans to sell alcohol at our doorsteps and to make alcohol available in remote hamlets with the help of mobile wine shops. Though the Minister had now withdrawn the statement, we are very anxious if this plan will come into action in the near future. This is based on our observation that there is a target set for the Excise Department to raise Crore 21,000 from the sale of Alcohol! This forces the sellers to use any method possible, including illegal sales to reach the targeting amount! This revenue is being raised at the cost of our ill-health, addiction of young persons, breakdown of our families and loss of livelihoods. If the state persists in such moves, we will be forced to protest against them in every form and in every way possible.

Here is the full text of the letter. This is also published in full in Hosadigantha newspaper today.

ದಿನಾಂಕ: ೧೪-೦WhatsApp Image 2019-09-15 at 09.33.12೯-೨೦೧೯

 

 

 

 

 

 

 

 

 

 

 

 

 

 

 

 

 

 

ಕರ್ನಾಟಕ ರಾಜ್ಯ ಸರ್ಕಾರಕ್ಕೊಂದು ತೆರೆದ ಪತ್ರ

ಅಕ್ರಮ ಮದ್ಯ ಮಾರಾಟದಿಂದ ನಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಲವಾರು ಕಡೆ ದ್ವನಿ ಎತ್ತಿರುವ ಮಕ್ಕಳು ಮತ್ತು ಮಹಿಳೆಯರ ಪ್ರತಿನಿಧಿಗಳಾದ ನಾವು ಅತ್ಯಂತ ಕಾಳಜಿಯಿಂದ ಈ ಪತ್ರ ನಿಮಗೆ ಬರೆಯುತ್ತಿದ್ದೇವೆ.

ದಿನಾಂಕ ೦೪-೦೯-೨೦೧೯ರ ಬುಧವಾರದಂದು ಬೆಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯ ಮಾನ್ಯ ಸಚಿವರಾದ ಶ್ರೀ ಎಚ್. ನಾಗೇಶರವರು ‘ಮನೆಗಳಿಗೆ ಮದ್ಯ ಸರಬರಾಜು ಮಾಡಲು ಉದ್ದೇಶಿಸಲಾಗಿದೆ. ಮನೆಗಳ ಬಳಿ ಮದ್ಯ ಮಾರಾಟಕ್ಕೆ ಯಾವ ವಿಧಾನ ಅನುಸರಿಸಬೇಕೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಮನೆಗಳಿಗೆ ಹಾಲು ಸರಬರಾಜು ಮಾಡುವ ಮಾದರಿಯಲ್ಲಿಯೇ ಮದ್ಯವನ್ನೂ ಪೂರೈಸಲಾಗುವುದು’ ಎಂದಿದ್ದರು.(ಉಲ್ಲೇಖ : ಪ್ರಜಾವಾಣಿ, ೫-೯-೨೦೧೯ರ, ರಾಜ್ಯ ವಾರ್ತೆ) ಅಲ್ಲದೇ, ‘ಕೆಲವು ಕಡೆ ಮದ್ಯದ ಅಂಗಡಿಗಳು ದೂರ ಇರುತ್ತವೆ. ಕೆಲವು ಕಡೆ ಮದ್ಯದ ಅಂಗಡಿಗಳೇ ಇರುವುದಿಲ್ಲ.  ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಮಾಡಲಾಗಿದ್ದು, ಮನೆ ಬಾಗಿಲಿಗೆ ಮದ್ಯ ಪೂರೈಸುವ ಚಿಂತನೆ ಕೂಡ ಇಲಾಖೆಯ ಮುಂದಿದೆ. ಮೊಬೈಲ್ ವೈನ್ ಶಾಪ್‌ಗಳಿಗೆ ಸರ್ಕಾರ ಚಿಂತೆ ಮಾಡಿದೆ. ಎಲ್ಲೆಲ್ಲಿ ವೈನ್ ಶಾಪ್‌ಗಳಿಲ್ಲವೋ ಅಲ್ಲಿ ಸಂಚಾರಿ ವೈನ್ ಶಾಪ್‌ಗಳ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆದಾಯ ಬರುತ್ತದೆ ಎಂಬುದು ಸರ್ಕಾರದ ಚಿಂತನೆ. ೨೦೧೮-೧೯ರಲ್ಲಿ ೧೯,೭೫೦ ಕೋಟಿಗುರಿ ಸಾಧಿಸಿದ್ದೇವೆ. ೨೦೧೯-೨೦ನೇ ಸಾಲಿನಲ್ಲಿ ೨೧ ಸಾವಿರ ಕೋಟಿ ಗುರಿ ನಿಗದಿಪಡಿಸಿದ್ದೇವೆ ’ ಎಂದಿದ್ದರು (ಉಲ್ಲೇಖ : ದಿನಾಂಕ: ೦೪-೦೯-೨೦೧೯ ರಂದು, ಪಬ್ಲಿಕ್ ಟಿವಿ (http://www.publictv.in/) ಪ್ರಕಟ).

ಒಂದು ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ನೀಡುವಂತಹ ಇಂತಹ ಹೇಳಿಕೆ ಅತ್ಯಂತ ಖಂಡನೀಯವಾದುದು. ರಾಜ್ಯದ ಸಮಗ್ರ ಅಭಿವೃದ್ಧಿ ಎನ್ನುವಾಗ ಮಕ್ಕಳ, ಮಹಿಳೆಯರ ರಕ್ಷಣೆಯೂ ಒಳಗೊಳ್ಳುತ್ತದೆಯೇ ವಿನಃ ಅದನ್ನು ಕಡೆಗಣಿಸಿ, ಕೇವಲ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯವನ್ನಷ್ಟೇ ಪರಿಗಣಿಸಿ ಯೋಜನೆ ತಯಾರಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.

ಮಾರನೇ ದಿನ ಅಂದರೆ ೦೫-೦೯-೨೦೧೯ರಂದು ಸಂಜೆಯ ವೇಳೆಗೆ ವಿವಿಧ ಮೂಲಗಳಿಂದ ಬಂದಂತಹ ಒತ್ತಡ ಹಾಗೂ ಮುಖ್ಯಮಂತ್ರಿಗಳಾದ ತಾವು ನೇರವಾಗಿ ಇಂತಹ ಹೇಳಿಕೆಗೆ ಸ್ಪಷ್ಟನೆ ನೀಡಲು ಆದೇಶಿಸಿದ ಪರಿಣಾಮವಾಗಿ ಮಾನ್ಯ ಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡು, ಸರ್ಕಾರದ ಮುಂದೆ ಇಂತಹ ಯಾವುದೇ ಯೋಜನೆ ಇಲ್ಲ. ಅಲ್ಲದೇ ನನ್ನ ಹೇಳಿಕೆಯನ್ನು ಮಾಧ್ಯಮದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನುವುದರೊಂದಿಗೆ ರಾಜ್ಯದ ಮಹಿಳೆಯರಿಗೆ ಇದರಿಂದಾಗಿ ನೋವುಂಟಾಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ನಮಗೆ ಅತ್ಯಂತ ಗಾಬರಿ ಮೂಡಿಸಿದ್ದ ಮಂತ್ರಿಗಳ ಮೊದಲ ಹೇಳಿಕೆ ಸದ್ಯಕ್ಕೆ ಹಿಂಪಡಯಲಾಗಿದ್ದರೂ ಇದು ಒಂದು ತಾತ್ಕಾಲಿಕ ಪರಿಹಾರವಷ್ಟೆ. ಇಂತಹ ಒಂದು ಆಲೋಚನೆಯ ಕುರಿತಾದ ಚರ್ಚೆ ಎಲ್ಲಿಯೂ ನಡೆಯದೇ ಮಾನ್ಯ ಮಂತ್ರಿಗಳು ಈ ರೀತಿಯ ಹೇಳಿಕೆ ನೀಡಿರುವ ಸಾಧ್ಯತೆ ಅತ್ಯಂತ ಕಡಿಮೆ.

ಈಗ ಇಂತಹ ಆಲೋಚನೆ ಇಲ್ಲ ಎಂದು ಹೇಳಿ, ಹೇಳಿಕೆಯನ್ನು ಹಿಂಪಡೆದಿರಬಹುದು. ಆದರೆ ಯಾವುದೇ ಸಂದರ್ಭದಲ್ಲಿ ಪುನಃ ಇದು ಜಾರಿಯಾಗದು ಎಂದು ಹೇಳಲು ಸಾಧ್ಯವಿಲ್ಲ. ಮದ್ಯಪಾನದಿಂದಾಗಿ ಮಕ್ಕಳು ಮಹಿಳೆಯರ ಮೇಲೆ ನಿರಂತರ ಶೋಷಣೆ, ಮಕ್ಕಳ ಶಿಕ್ಷಣ-ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು, ಅಪ್ರಾಪ್ತ ವಯಸ್ಸಿನ ಮಕ್ಕಳು, ಯುವ ಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿರುವುದು, ಹಲವಾರು ಕುಟುಂಬಗಳು ಜೀವನ ನಡೆಸಲು ಸಾಧ್ಯವಾಗದೇ ಅಕ್ಷರಶಃ ಬೀದಿಗೆ ಬಿದ್ದಂತಹ ಪರಿಸ್ಥಿತಿ ಇರುವುದರಿಂದ ಮದ್ಯಪಾನ ನಿಷೇಧಕಾಯಿದೆಯನ್ನೇ  ರಾಜ್ಯದಾದ್ಯಂತ ಜಾರಿಗೆ ತರಬೇಕೆಂದು ಮಹಿಳೆಯರ ಒತ್ತಾಯವಿರುವಾಗ, ಮಕ್ಕಳ-ಮಹಿಳೆಯರ-ಯುವಜನರ ರಕ್ಷಣೆಗೆ ಸೂಕ್ತ ಯೋಜನೆ ರೂಪಿಸಬೇಕೇ ವಿನಃ, ರಾಜ್ಯದ ಬೊಕ್ಕಸೆ ತುಂಬಿಸುವುದಕ್ಕಾಗಿ ಮದ್ಯ ಮಾರಾಟ ಹೆಚ್ಚಿಸುವ ಯೋಜನೆಗಳನ್ನು ರೂಪಿಸುವ ಬಗ್ಗೆ ಆಲೋಚಿಸಿದರೆ ರಾಜ್ಯದಾದ್ಯಂತ ಮಹಿಳೆಯರು ತಮ್ಮ ಹಕ್ಕಿಗಾಗಿ, ರಕ್ಷಣೆಗಾಗಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಷ್ಟೇ ಅಲ್ಲದೇ, ಯಾವುದೇ ಪರವಾನಿಗೆಗಳಿಲ್ಲದೇ ಪ್ರಮುಖವಾಗಿ ಹಲವಾರು ಹಳ್ಳಿಗಳ ಗೂಡಂಗಡಿಗಳಲ್ಲಿ, ಕಿರಾಣಿ-ತರಕಾರಿ ಅಂಗಡಿಗಳಲ್ಲಿ, ಹೊಟೆಲ್‌ಗಳಲ್ಲಿ, ಮನೆಗಳಲ್ಲಿ, ಚೀಲಗಳಲ್ಲಿ ಇಟ್ಟುಕೊಂಡು ತಿರುಗಾಡುತ್ತಾ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಹಲವಾರು ಬಾರಿ ಮಹಿಳಾ ಗುಂಪುಗಳು ಈ ಬಗ್ಗೆ ಧ್ವನಿ ಎತ್ತಿ, ಗ್ರಾಮ ಸಭೆ ನಿರ್ಣಯಗಳನ್ನು ಮಾಡಿ, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಅನಧಿಕೃತವಾಗಿ ನಡೆಯುತ್ತಿರುವ ಇಂತಹ ಮಾರಾಟಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ, ಹೋರಾಟ ಮಾಡಿದರೂ, ಆ ಬಗ್ಗೆ ಯಾವುದೇ ಪರಿಣಾಮಕಾರಿ ಕಠಿಣ ಕ್ರಮಗಳನ್ನು ಇನ್ನೂ ಕೈಗೊಂಡಿಲ್ಲ. ಬದಲಾಗಿ ಅಧಿಕೃತ ಬಾರ್‌ಗಳಿಗೆ ಕನಿಷ್ಟ ಇಂತಿಷ್ಟು ಮದ್ಯ ಮಾರಾಟವಾಗಬೇಕು ಎಂಬ ಕನಿಷ್ಟ ಮಾರಾಟ ನಿಯಮವನ್ನು ೨೦೧೬ ರಲ್ಲೇ ಹಿಂಪಡೆದು ಕೊಂಡಿದ್ದರೂ, ರಾಜ್ಯ ಸರ್ಕಾರ ಹಾಕಿಕೊಂಡ ಆದಾಯದ ಗುರಿ ಸಾಧನೆಗೆ ಬಾರ್‌ಗಳಿಗೆ ಮಾರಾಟ ಹೆಚ್ಚಿಸಲು ಒತ್ತಡ ಹೇರುತ್ತಿದ್ದಾರೆ. ಇಂತಹ ಒತ್ತಡಗಳಿಂದಾಗಿ ಅಧಿಕೃತ ಬಾರ್‌ಗಳು ಅಕ್ರಮ ಮದ್ಯ ಮಾರಾಟ ಮಾರಾಟದಲ್ಲಿ ಆಸಕ್ತಿ ತೋರುವವರನ್ನು ಅವರ ಮದ್ಯವರ್ತಿಗಳಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಅಕ್ರಮ ಮಾರಾಟಗಳಿಂದ ಮನೆಯ ಸಮೀಪವೇ ಮದ್ಯ ಸಿಗುವುದರಿಂದ ನೇರವಾಗಿ ಇದರ ದುಷ್ಪರಿಣಾಮಕ್ಕೆ ಬಲಿಯಾಗುತ್ತಿರುವವರು ಮಾತ್ರ ಮಕ್ಕಳು ಮತ್ತು ಮಹಿಳೆಯರುಎಂಬುದು ವಿಷಾದದ ಸಂಗತಿ. ಅಧಿಕಾರಿಗಳ ಕೃಪಾ ಕಟಾಕ್ಷದೊಂದಿಗೆ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಈಗ ನಡೆಯುತ್ತಿರುವ ಇಂತಹ ಮಾರಾಟಗಳು, ಮನೆ-ಮನೆಗೆ ಮದ್ಯಮಾರಾಟದಂತಹ ಯೋಜನೆಗಳು ಜಾರಿಗೆ ಬಂದರೆ, ಅಕ್ರಮಗಳು ಸಕ್ರಮವಾಗಿ ರಾಜಾರೋಷವಾಗಿ ಮಾರಾಟಗಳು ನಡೆದು, ದುಡಿದ ಅಲ್ಪ ಆದಾಯವನ್ನು ಕುಡಿತಕ್ಕೆ ಚೆಲ್ಲಿ, ಕುಟುಂಬವನ್ನೂ ಮರೆತು ಬೆಳಿಗ್ಗೆಯಿಂದ ರಾತ್ರಿಯವರೆಗೂ ಮದ್ಯದ ನಶೆಯಲ್ಲಿಯೇ ತೇಲುವಂತಾಗುವ ಪರಿಸ್ಥಿತಿಗೆ ಇನ್ನೂ ಹೆಚ್ಚಿನ ಪುಷ್ಟಿ ನೀಡಿದಂತಾಗುತ್ತದೆ.

ಮಕ್ಕಳ-ಮಹಿಳೆಯರ, ಬದಿಗೊತ್ತಲ್ಪಟ್ಟ ಸಮುದಾಯದವರನ್ನೂ ಒಳಗೊಂಡಂತಹ, ಅವರರಕ್ಷಣೆ, ಘನತೆ ಗೌರವಕ್ಕೆ ಕುಂದುಂಟಾಗದ ರೀತಿಯಲ್ಲಿ ರಾಜ್ಯ/ಕೇಂದ್ರ ಸರ್ಕಾರಗಳು ಸಮಗ್ರ ಅಭಿವೃದ್ಧಿಯನ್ನು ಯೋಜನೆಗಳನ್ನು ರೂಪಿಸಬೇಕಾಗಿದೆ. ರಾಜ್ಯ ಬೊಕ್ಕಸದ ಆದಾಯ ಹೆಚ್ಚಳಕ್ಕೆ ಮದ್ಯಮಾರಾಟವೊಂದೇ ಪ್ರಮುಖ ಮಾರ್ಗವಲ್ಲ. ಇಂತಹ ಯೋಜನೆಗಳು ಜನಸಾಮಾನ್ಯರ ಜೀವನವನ್ನೇ ಬುಡಮೇಲು ಮಾಡಬಹುದು, ಅಸ್ತವ್ಯಸ್ಥ ಗೊಳಿಸಬಹುದು ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ಅಂಶ. ಇದನ್ನು ಅರ್ಥ ಮಾಡಿಕೊಂಡು ರಾಜ್ಯ/ಕೇಂದ್ರ ಸರ್ಕಾರಗಳು ಯೋಜನೆತಯಾರಿಸಬೇಕು. ಇಲ್ಲವಾದಲ್ಲಿ ಮದ್ಯಪಾನದ ದುಷ್ಪರಿಣಾಮಗಳನ್ನು ಅನುಭವಿಸಿದವರು ಹೋರಾಟಕ್ಕಿಳಿಯಲು ಆಹ್ವಾನ ನೀಡಿದಂತೆ.

ಈ ಹಿಂದೆ ಭೀಮ ಸಂಘ (ದುಡಿಯುವ ಮಕ್ಕಳ ಸಂಘಟನೆ), ಮಕ್ಕಳ ಸಂಘ ಮತ್ತು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸದಸ್ಯರಾದ ನಾವು ಹಲವಾರು ಸಂದರ್ಭಗಳಲ್ಲಿ ವಿವಿಧ ಹಂತದ ಸರ್ಕಾರ, ವೇದಿಕೆಗಳಲ್ಲಿ ಮದ್ಯಪಾನದಿಂದ ಮಕ್ಕಳು, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಧ್ವನಿ ಎತ್ತಿದ್ದೇವೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತ, ಮಕ್ಕಳು ಮತ್ತು ಮಹಿಳೆಯರ ರಕ್ಷಣೆಯನ್ನು ಕಡೆಗಣಿಸಿ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವ ಇಂತಹ ಯಾವುದೇ ಪ್ರಯತ್ನಗಳು ಮರುಕಳಿಸಬಾರದೆಂದು ಒತ್ತಾಯಿಸುತ್ತೇವೆ.

ಪರವಾಗಿ,
ಭೀಮ ಸಂಘ, ಮಕ್ಕಳ ಸಂಘ ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ